ಪ್ರಾಗ್ಜೀವವಿಜ್ಞಾನ -
	ಜೀವ್ಯವಶೇಷಗಳ ವೈಜ್ಞಾನಿಕಾಧ್ಯಯನ (ಪೇಲಿಯಂಟಾಲಜಿ), ಪ್ರಾಚೀನಕಾಲದ ಜೀವಿಗಳ ದೇಹ ಅಥವಾ ಅದರ ಒಂದು ಭಾಗ, ಕೊನೆಗೆ ಅದಕ್ಕೆ ಸಂಬಂಧಿಸಿದಂತೆ ಇರುವ ವಸ್ತು. ಶಿಲೆಗಳಲ್ಲಿ ನೈಜರೀತಿಯಲ್ಲಿ ರಕ್ಷಿತವಾಗಿದ್ದರೆ ಅದಕ್ಕೆ ಜೀವ್ಯವಶೇಷವೆಂದು ಹೆಸರು. ಜೀವವಿಜ್ಞಾನವನ್ನು ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನ ಎಂದು ಎರಡು ಭಾಗಗಳಾಗಿ ವಿಭಜಿಸಿರುವುದು ಸರಿಯಷ್ಟೆ. ಹಾಗೆಯೇ ಪ್ರಾಗ್ಜೀವವಿಜ್ಞಾನವನ್ನು ಪ್ರಾಗ್ಪ್ರಾಣಿವಿಜ್ಞಾನ ಮತ್ತು ಪ್ರಾಗ್ಸಸ್ಯವಿಜ್ಞಾನ ಎಂದು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಆದರೆ ಜೀವವಿಜ್ಞಾನ ಒಂದೇ ಒಂದು ಕಾಲದ, ಅಂದರೆ ಸಮಕಾಲೀನ ಸಸ್ಯ ಮತ್ತು ಪ್ರಾಣಿ ಕುರಿತು ವಿಚಾರ ಮಾಡುತ್ತದೆ. ಪ್ರಾಗ್ಜೀವವಿಜ್ಞಾನವಾದರೋ 60 ಕೋಟಿ ವರ್ಷಗಳಷ್ಟು ಹಿಂದೆ ಜೀವಿಸಿದ್ದ ಸಸ್ಯಗಳು ಮತ್ತು ಪ್ರಾಣಿಗಳನ್ನು ಕುರಿತು ವಿಚಾರ ಮಾಡುತ್ತದೆ.

	ಜೀವಿಗಳ ದೇಹಗಳು ರಕ್ಷಿತವಾಗಲು ಅವು ಕೊಳೆದು ಜೀರ್ಣವಾಗಿ ಹೋಗುವುದಕ್ಕಿಂತ ಬಲು ಮುಂಚೆಯೇ ಮಣ್ಣಿನಿಂದ ಮುಚ್ಚಲ್ಪಡಬೇಕು. ಎರಡನೆಯದಾಗಿ ಅವುಗಳ ದೇಹದಲ್ಲೆ ಗಟ್ಟಿಯಾದ ಅಂಗಗಳಿರಬೇಕು. ಆ ಅಂಗಗಳು ಸಾಕಷ್ಟು ಕಾಲ ಶಿಥಿಲವಾಗದೆ ಸ್ಥಿರವಾಗಿರಬಲ್ಲ ರಾಸಾಯನಿಕ ಸಂಯೋಜನೆಯಿಂದ ಕೂಡಿರಬೇಕು. ಕಡಲುಗಳಲ್ಲಿ ವಾಸಿಸುವ ಪ್ರಾಣಿಗಳ ಮರಣಾನಂತರ ಅವುಗಳ ಅಸ್ಥಿ ತಳಸೇರುತ್ತದೆ. ಆ ಪ್ರದೇಶ ಪ್ರವಾಹಗಳಿಂದ ಕೂಡಿದ್ದರೆ, ಅಸ್ಥಿ ಪ್ರವಾಹದೊಡನೆ ಸಾಗಿ, ಅದರ ವೇಗ ಕಡಿಮೆಯಾದಾಗ ಬೇರೆ ವಸ್ತುಗಳ ಜೊತೆ ಸಂಚಯಿಸುತ್ತದೆ. ಸ್ಥಾವರಜೀವಿಗಳು, ಬಿಲವಾಸಿಗಳು ಮುಂತಾದವು ಅವು ವಾಸಿಸುತ್ತಿದ್ದ ಸ್ಥಳದಲ್ಲಿಯೇ ಮರಳು ಅಥವಾ ಧೂಳು ಕಣಗಳ ಸಂಚಯನದಿಂದ ಮುಚ್ಚಿ ರಕ್ಷಿತವಾಗುವುವು. ತೀರಪ್ರದೇಶದಲ್ಲಿ ಸಾಗರ ತಳ ಆಗಾಗ್ಗೆ ಕುಸಿಯುತ್ತಿರುವ ಪ್ರದೇಶಗಳು ಜೀವ್ಯವಶೇಷಗಳ ರಕ್ಷಣೆಗೆ ಅತ್ಯಂತ ಪ್ರಶಸ್ತ ಕ್ಷೇತ್ರಗಳು. ಹವಳದಿಬ್ಬಗಳಲ್ಲಿ ವಾಸಿಸುವ ಜೀವಿಗಳ ಅವಶೇಷಗಳೂ ಉತ್ತಮ ರೀತಿಯಲ್ಲಿ ರಕ್ಷಿಸಲ್ಪಡುವುವು. ತೀರ ಪ್ರದೇಶ ಜೌಗು ಭೂಮಿಯಾಗಿದ್ದು, ಸಾಕಷ್ಟು ಅಸ್ಥಿರವಾದುದಾದರೆ, ಅಲ್ಲಿ ದಟ್ಟ ಕಾಡುಗಳು ಬೆಳೆದು ಕುಸಿದು, ನೀರಿನಿಂದ ಆವರಿಸಲ್ಪಟ್ಟು ಸಂಚಯನದಿಂದ ಮುಚ್ಚಲ್ಪಡುತ್ತದೆ. ಹೀಗೆ ಅನೇಕ ತಲೆಮಾರಿನ ಕಾಡುಗಳು ಒಂದೇ ಪ್ರದೇಶದಲ್ಲಿ ಸಮಾಧಿ ಹೊಂದಿ ಕಲ್ಲಿದ್ದಲು ಸ್ತರಗಳಾಗಿರುವುವು. ಅವುಗಳಲ್ಲಿ ಆಯಾ ಕಾಲದಲ್ಲಿ ವಾಸಿಸುತ್ತಿದ್ದ ಪ್ರಾಣಿಗಳು ಮತ್ತು ಕೀಟಗಳು ಸಹ ಸಮಾಧಿ ಹೊಂದಿ ರಕ್ಷಿಸಲ್ಪಟ್ಟಿರುತ್ತವೆ.

	ನೆಲದ ಮೇಲೆ ವಾಸಮಾಡುವ ಸಸ್ಯ, ಪ್ರಾಣಿಗಳ ರಕ್ಷಣೆಗೆ ಇರುವ ಅವಕಾಶ ಬಲು ಕಡಿಮೆ. ಇಲ್ಲಿ ಸತ್ತುಬಿದ್ದ ಜೀವಿಗಳ ದೇಹ ಕೊಳೆತು ಜೀರ್ಣಗೊಂಡು, ಮಣ್ಣಿನೊಂದಿಗೆ ಬೆರೆತು ಹೋಗುವುದು ಸರ್ವವಿದಿತ. ಸರೋವರಗಳಲ್ಲಿ ಜೀವಿಸುವ ಇಲ್ಲವೇ ಅಪ್ಪಿತಪ್ಪಿ ಸರೋವರಗಳಿಗೆ ತಳ್ಳಲ್ಪಟ್ಟ ಗವಿಗಳಲ್ಲಿ ವಾಸಿಸಿ ಸತ್ತಮೇಲೆ ಬಲುಬೇಗ ಮಣ್ಣಿನಿಂದ ಮುಚ್ಚಲ್ಪಡುವ ಇಲ್ಲವೇ ಮರಳು ದಿಬ್ಬಗಳಲ್ಲಿ ಹೂತು ಹೋಗುವ ಸಸ್ಯ, ಪ್ರಾಣಿಗಳ ಅಸ್ಥಿಗಳು ರಕ್ಷಣೆಗೊಳ್ಳುತ್ತವೆ.

	ಜೀವ್ಯವಶೇಷಗಳ ರಕ್ಷಣೆಯಲ್ಲಿ ಅವುಗಳ ಅಸ್ಥಿಯ ಮತ್ತು ಅವನ್ನು ಮುಚ್ಚಿದ ಸಂಚಯನಗಳ ಸಂಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಮೃದ್ವಂಗಿಗಳ ಮತ್ತು ಬಾಹುಪದಿಗಳ ಚಿಪ್ಪುಗಳು ಜೇಡು ಸಂಚಯನದಲ್ಲಿ ಸಮಾಧಿಗೊಂಡರೆ, ಅವು ಮೂಲಸ್ಥಿತಿಯಲ್ಲಿಯೇ ಅನಂತಕಾಲ ರಕ್ಷಿತವಾಗಬಲ್ಲವು. ಏಕೆಂದರೆ ಜೇಡು ನೀರನ್ನು ತನ್ನೊಳಗೆ ಹಾಯಲು ಬಿಡುವುದಿಲ್ಲ. ಜೇಡು ಕಲ್ಲೆಣ್ಣೆಯಿಂದ ಕೂಡಿದ್ದರಂತೂ ಪ್ರಾಣಿಗಳ ಮೃದು ಅವಯವಗಳು ಸಹ ರಕ್ಷಿಸಲ್ಪಡುವುವು. ಸಿ.ಡಿ. ವಾಲಕಾಟ್ ವರ್ಣಿಸಿರುವ ಬ್ರಿಟಿಷ್ ಕೊಲಂಬಿಯಾದ ಕೇಂಬ್ರಿಯನ್ ಮಧ್ಯಕಾಲದ ಜೀವ್ಯವಶೇಷಗಳು ಗಮನಾರ್ಹವಾದವು. ಇಲ್ಲಿ ಹುಳುಗಳ ಮೃದು ಅಂಗಗಳ ಆಕಾರಗಳು ಅತ್ಯುತ್ತಮವಾಗಿ ರಕ್ಷಿಸಲ್ಪಟ್ಟಿವೆ. ಅಂಗಗಳ ಒಳರಚನೆಯನ್ನು ಇಂಗಾಲ ಪೊರೆಗಳ ವರ್ಣಭೇದದಿಂದ ತಿಳಿಯಲು ಸಾಧ್ಯವಾಗಿದೆ. ಜೀವಿಗಳ ಅಸ್ಥಿ ಮರಳಿನಿಂದ ಮುಚ್ಚಿದರೆ, ಆಮ್ಲಭರಿತ ಅಂತರ್ಜಲ ಅದನ್ನು ಕರಗಿಸಿ ಸಾಗಿಸುತ್ತದೆ. ಆಗ ಅದರ ಅಚ್ಚೊತ್ತಿದ ಕುಹರಗಳು ಮಾತ್ರ ಉಳಿಯುತ್ತವೆ. ಒಂದು ವೇಳೆ ಮರಳಿನ ಮೇಲೆ ಜೇಡು ಬಲು ಬೇಗನೆ ನಿಕ್ಷೇಪಗೊಂಡರೆ ಅಥವಾ ಮರಳು ಕಣಗಳನ್ನು ಸುಣ್ಣವಸ್ತು ಬಂಧಿಸಿದರೆ ಮತ್ತು ಅಂತರ್ಜಲ ಸುಣ್ಣವಸ್ತುವಿನಿಂದ ಪರಿಪೂರಿತವಾಗಿದ್ದರೆ ಅಥವಾ ಅಸ್ಥಿ ಸುಣ್ಣವಸ್ತುವಿನಲ್ಲಿ ಸಮಾಧಿಯಾದರೆ ಅದು ಹಾಗೆಯೇ ಉಳಿಯುತ್ತದೆ. ಅಪರೂಪ ಸನ್ನಿವೇಶಗಳಲ್ಲಿ ಅಸ್ಥಿಯ ಸುಣ್ಣವಸ್ತು ಓಪಾಲ್ ಅಥವಾ ಸ್ವರ್ಣಮಕ್ಷಿಕ ಕಣವಿನಿಮಯ ಕಾರ್ಯಗತಿಯಿಂದ ಖನಿಜೀಕರಣಗೊಳ್ಳಬಹುದು.

	ಅಧ್ಯಯನ ಪೂರ್ವಸಿದ್ಧತೆ: ಜೀವ್ಯವಶೇಷಗಳನ್ನು ಅಧ್ಯಯನ ಮಾಡಲು ಅವು ಸಮಾಧಿಗೊಂಡಿರುವ ಮಾತೃಕೆಯಿಂದ ಅವನ್ನು ಸಂಪೂರ್ಣವಾಗಿ ಅಥವಾ ಸಾಧ್ಯವಾಗುವಷ್ಟು ಮಟ್ಟಿಗೆ ಬಿಡುಗಡೆ ಮಾಡುವುದು ಅತ್ಯಾವಶ್ಯಕ. ಬಿಡುಗಡೆ ಮಾಡುವ ಕಾರ್ಯ ಮಾತೃಕೆ-ಮಾತೃಕೆಗೆ ವ್ಯತ್ಯಾಸವಿರುವುದು ಅಲ್ಲದೆ ಅಸ್ಥಿಗಳ ಸಂಯೋಜನೆಗೆ ಅನುಸಾರವಾಗಿಯೂ ವ್ಯತ್ಯಾಸವಿರುವುದು. ಜೇಡುಶಿಲೆಗಳಲ್ಲಿ ರಕ್ಷಿಸಲ್ಪಟ್ಟಿರುವ ಎಲುಬುಗಳನ್ನೂ ಚಿಪ್ಪುಗಳನ್ನೂ ತೊಳೆಯುವುದರ ಮೂಲಕ ಸಂಪೂರ್ಣವಾಗಿ ಬಿಡುಗಡೆ ಮಾಡಬಹುದು. ಜೇಡುಶಿಲೆ, ಮರಳುಶಿಲೆ ಮತ್ತು ಸಣ್ಣಶಿಲೆಗಳಲ್ಲಿರುವ ಕೊಂಬು ವಸ್ತುವಿನ ಸಂಧಿಪದಿಗಳ ಮತ್ತು ಗ್ರಾಪ್ಟೊಲೈಟುಗಳ ಅಸ್ಥಿಗಳನ್ನು ಹೈಡ್ರೊಫ್ಲೂರಿಕ್ ಆಮ್ಲಗಳ ಸಹಾಯದಿಂದ ಬಿಡುಗಡೆ ಮಾಡಬಹುದು. ಅನಂತರ ಅಸ್ಥಿಯನ್ನು ಬೇಕಾದ ದಿಶೆಯಲ್ಲಿ ಕತ್ತರಿಸಿ ಬಣ್ಣಗೂಡಿಸಿ ನೆಲೆಗೊಳಿಸಬಹುದು. ಆದರೆ, ಸಾಮಾನ್ಯವಾಗಿ ಜೀವ್ಯವಶೇಷಗಳ ಸುತ್ತ ಇರುವ ಮಾತೃಕಾ ವಸ್ತುವನ್ನು ಸೂಜಿ, ಉಳಿ ಮುಂತಾದ ಸಲಕರಣೆಗಳಿಂದ ಕೆರೆದು ಬಿಡಿಸಬೇಕಾಗುತ್ತದೆ. ಜೀವ್ಯವಶೇಷಗಳು ಅಚ್ಚೊತ್ತಿನಿಂದ ಆದ ಕುಹರಗಳಾದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಮೇಣ ಅಥವಾ ಮರವಜ್ರದಿಂದ ಈ ಕುಹರದೊಳಕ್ಕೆ ಎರಕ ಹೊಯ್ದು ಆ ಅವಶೇಷಗಳ ರೂಪರೇಖೆಗಳನ್ನು ಪಡೆಯಬೇಕಾಗುತ್ತದೆ. ಕೆಲವು ವೇಳೆ ಜೀವ್ಯವಶೇಷ ಮತ್ತು ಮಾತೃಕೆಗಳು ಒಂದೇ ರಾಸಾಯನಿಕ ಸಂಯೋಜನೆ ಹೊಂದಿರುವುದುಂಟು. ಅಲ್ಲದೇ ಉಕ್ಕು ಆಯುಧಗಳಿಂದ ಬಿಡಿಸಲಾರದಷ್ಟು ಗಟ್ಟಿಯಾಗಿಯೂ ಇರುವುದುಂಟು. ಈ ಬಂಧವನ್ನು ಆಮ್ಲಗಳಿಂದ ಬಿಡಿಸುವುದೂ ಕಷ್ಟವಾಗುತ್ತದೆ. ಆಗ ಜೀವ್ಯವಶೇಷದ ತಳಭಾಗವನ್ನು ಸಮತಲವಾಗಿ ಉಜ್ಜಿ ಅದರ ಛಾಯಾಚಿತ್ರ ತೆಗೆಯಬೇಕು. ಇಲ್ಲವೇ ಉಜ್ಜಿದ ಮೈಯನ್ನು ಆಮ್ಲಗಳಿಂದ ಮೃದುಗೊಳಿಸಿ, ಅದರ ಮೇಲೆ ಸೆಲ್ಯುಲೋಸ್ ದ್ರವ ಹೊಯ್ದು, ಅದು ಗಟ್ಟಿಯಾದ ಬಳಿಕ ಜೀವ್ಯವಶೇಷದ ತೆಳುಪೊರೆಯನ್ನು ತೆಗೆಯಬೇಕು. ಹೀಗೆ ನಿರ್ದಿಷ್ಟ ಅಂತರಗಳಲ್ಲಿ ಅನೇಕ, ಕೆಲವು ವೇಳೆ ಸಾವಿರಾರು, ಛಾಯಾಚಿತ್ರ ಅಥವಾ ತೆಳುಪೊರೆಗಳನ್ನು ತೆಗೆದು, ಅವನ್ನು ಕ್ರಮವಾಗಿ ಜೋಡಿಸಿದರೆ, ಜೀವ್ಯವಶೇಷದ ಆಕೃತಿ ಉಂಟಾಗುವುದು.

	ಜೀವ್ಯವಶೇಷಗಳನ್ನು ಮುಖ್ಯವಾಗಿ ಎರಡು ದೃಷ್ಟಿಗಳಿಂದ ಪರಿಶೋಧಿಸಲಾಗಿದೆ. ಅವನ್ನು ಭೂವಿಜ್ಞಾನಿಗಳು ಶಿಲೆಗಳ ಕಾಲಸೂಚಿಗಳಾಗಿ ಉಪಯೋಗಿಸುತ್ತಾರೆ. ಹೀಗೆ ಶಿಲೆಗಳ ವಯೋನಿರ್ಧಾರಕ್ಕೆ ಮೊದಲ ಬಾರಿಗೆ ಅವನ್ನು ಉಪಯೋಗಿಸಿದವರು ವಿಲಿಯಮ್ ಸ್ಮಿತ್. ವಾಸ್ತವವಾಗಿ ಶಿಲಾಸ್ತೋಮದ ಪ್ರತಿ ಪದರು ಅಥವಾ ಪ್ರತಿಪದರುಗುಂಪನ್ನು, ಅದರಲ್ಲಿರುವ ಜೀವ್ಯವಶೇಷಗಳಿಂದ ಗುರುತಿಸಬಹುದೆಂದು ಇವರು ಮನಗಂಡರು. ಅಲ್ಲದೆ ಸಮಕಾಲೀನ ಶಿಲೆಗಳನ್ನು ಗುರುತಿಸುವುದಕ್ಕೂ ಅವನ್ನು ಉಪಯೋಗಿಸಬಹುದೆಂದು ಅರಿತರು. ಇದರ ಪರಿಣಾಮವಾಗಿ ವಿಲಿಯಮ್ ಸ್ಮಿತ್ 1800ರ ಸುಮಾರಿಗೆ ಜೀವಪರಂಪರೆಯ ಕ್ರಮವನ್ನು ರೂಪಿಸಲು ಶಕ್ತರಾದರು. ಈ ಕ್ರಮನಿಯಮ ಬಲು ಬೇಗನೆ ಮನ್ನಣೆ ಗಳಿಸಿತು. ಅಲ್ಲದೆ ಪ್ರಾದೇಶಿಕ ಶಿಲಾಸ್ತೋಮಗಳ ವಿವರಗಳನ್ನು ಕ್ರೋಡೀಕರಿಸಿ, ಅವುಗಳ ಆಧಾರದ ಮೇಲೆ ಭೂಇತಿಹಾಸದ ಶಿಲಾಸ್ತಂಭವನ್ನು ರಚಿಸಲು ಸಾಧ್ಯವಾಯಿತು.

	ಇದಾದ 50 ವರ್ಷಗಳೊಳಗಾಗಿ ಪ್ರಪಂಚದ ನಾನಾಭಾಗಗಳಲ್ಲಿನ ಶಿಲಾಸ್ತೋಮಗಳು ಸ್ಥಾಪಿತವಾದುವು. ಜೀವಭೂಕಾಲದ ಉದ್ದಕ್ಕೂ ಸತತವಾಗಿ ವಿಕಾಸಗೊಂಡಿದೆಯೆಂಬ. ಆದ್ದರಿಂದ ಭೂಕಾಲದ ಪ್ರತಿಭಾಗದಲ್ಲಿಯೂ ಬೇರೆ ಬೇರೆ ವಿಧಗಳ ಸಸ್ಯಗಳೂ ಪ್ರಾಣಿಗಳೂ ಇದ್ದುವೆಂಬ ಆಧಾರದ ಮೇಲೆ ಜೀವಪರಂಪರೆಯ ಕ್ರಮನಿಯಮ ರೂಪಿತವಾಗಿದೆ. ಭೂಕಾಲಗಳ ಶಿಲಾಸ್ತೋಮಗಳನ್ನು ಒಂದರ ಮೇಲೊಂದು ವಯೋನುಗುಣವಾಗಿ ಸೇರಿಸಿದರೆ ತಳದ ಸ್ತೋಮದಲ್ಲಿ ಸರಳವಾದ ಅವ್ಯವಸ್ಥೆಯ ಮತ್ತು ಪ್ರಾವೀಣ್ಯ ಗಳಿಸಿಲ್ಲದ ಜೀವಿಗಳ ಅವಶೇಷಗಳಿರುತ್ತವೆ. ಪ್ರತಿಯೊಂದು ಸ್ತೋಮದ ಜೀವ್ಯವಶೇಷಗಳೂ ಕೆಳಗಣ ಸ್ತೋಮದ ಜೀವ್ಯವಶೇಷಗಳಿಗಿಂತ ಹೆಚ್ಚು ವಿಕಾಸ ಮಟ್ಟದವಾಗಿಯೂ ಮೇಲಣ ಸ್ತೋಮದ ಜೀವ್ಯವಶೇಷಗಳಿಗಿಂತ ಕಡಿಮೆ ವಿಕಾಸ ಮಟ್ಟದವಾಗಿಯೂ ಇರುತ್ತವೆ. ಅಲ್ಲದೆ ಪ್ರತಿಯೊಂದು ಸ್ತೋಮದ ಜೀವ್ಯವಶೇಷಗಳು ಕೆಳಗಣ ಮತ್ತು ಮೇಲಣ ಸ್ತೋಮಗಳಿಗಿಂತ ಭಿನ್ನವಾಗಿರುತ್ತವೆ. ಜೀವಿ ವಿಕಾಸಕ್ಕೆ ಪ್ರಪಂಚಾದ್ಯಂತವ್ಯಾಪ್ತಿ ಇರುವ ಪ್ರಯುಕ್ತ, ಸಮಕಾಲೀನ ಶಿಲೆಗಳಲ್ಲೆಲ್ಲ ಒಂದೇ ರೀತಿಯ ಜೀವ್ಯವಶೇಷಗಳಿರುತ್ತವೆ. ಅಂದಮಾತ್ರಕ್ಕೆ ತಳದ ಸ್ತೋಮದಲ್ಲಿರುವ ಪ್ರತಿಯೊಂದು ಜೀವಿ ಅಥವಾ ಜೀವಿಗುಂಪು ಮೇಲಣ ಶಿಲೆಗಳಲ್ಲಿರುವ ಎಲ್ಲ ಜೀವಿಗಳಿಗಿಂತಲೂ ಸರಳವಾಗಿ, ಆಧ್ಯವಸ್ಥೆ ಮತ್ತು ಕಡಿಮೆ ಪ್ರಾವೀಣ್ಯ ಹೊಂದಿದೆ ಎಂದು ತಿಳಿಯಬಾರದು. ತಳದ ಶಿಲೆಗಳಲ್ಲಿಯ ಕೆಲವು ಜೀವಿಗಳು ಮೇಲಣ ಶಿಲೆಗಳಲ್ಲಿರುವ ಕೆಲವು ಜೀವಿಗಳಿಗಿಂತ ಉನ್ನತ ವಿಕಾಸಮಟ್ಟದವೂ ಹೆಚ್ಚು ಪ್ರಾವೀಣ್ಯ ಗಳಿಸಿದವೂ ಆಗಿರುತ್ತವೆ. ಇಡೀ ಜೀವರಾಶಿಗಳನ್ನು ಹೋಲಿಸಿದರೆ ಕೆಳಸ್ತೋಮದ ಜೀವರಾಶಿ ಮೇಲಣ ಸ್ತೋಮದ ಜೀವರಾಶಿಗಿಂತ ಕಡಿಮೆ ವಿಕಾಸಮಟ್ಟದ್ದಾಗಿರುತ್ತದೆ. ಎರಡನೆಯದಾಗಿ ಒಂದೇ ಜಾತಿಯ ಸಸ್ಯ ಅಥವಾ ಪ್ರಾಣಿಗಳನ್ನು ಹೋಲಿಸಿದಾಗ ಕೆಳಸ್ತೋಮದ ಸಸ್ಯ ಅಥವಾ ಪ್ರಾಣಿಗಳು ಮೇಲಣ ಸ್ತೋಮದವುಗಳಿಗಿಂತ ಕಡಿಮೆ ವಿಕಾಸಮಟ್ಟದವಾಗಿರುತ್ತವೆ. ಭೂ ಕಾಲಗಳ ಇಡೀ ಜೀವರಾಶಿಗಳ ಸಂಶೋಧನೆಯಿಂದ ಭೂಇತಿಹಾಸಜ್ಞರು ಇನ್ನೊಂದು ನಿಯಮವನ್ನು ರೂಪಿಸಿದ್ದಾರೆ. ಸಸ್ಯಗಳ ಮತ್ತು ಪ್ರಾಣಿಗಳ ಗುಂಪುಗಳು ಒಂದಾದ ಮೇಲೊಂದರಂತೆ ಕ್ರಮವಾಗಿ ಉದ್ಭವಿಸಿವೆಯೆಂದೂ ಪ್ರತಿಯೊಂದು ಭೂಕಾಲವೂ ತನ್ನದೇ ಆದ ವಿಶಿಷ್ಟ ಜೀವರಾಶಿಯನ್ನು ಹೊಂದಿತ್ತೆಂದೂ ಆ ಜೀವರಾಶಿಯ ಸಹಾಯದಿಂದ ಭೂಕಾಲವನ್ನು ಗುರುತಿಸಬಹುದೆಂದೂ ಈ ನಿಯಮ ಹೇಳುತ್ತದೆ. ಜೀವ್ಯವಶೇಷ ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಆದರೆ ಅಲ್ಪಕಾಲಮಿತಿಯನ್ನು ಹೊಂದಿದ್ದರೆ ಅದು ಉತ್ತಮ ಕಾಲಸೂಚಿಯೆನ್ನಿಸುತ್ತದೆ. ಕಾಲಸೂಚಿ ಅವಶೇಷಗಳು ಸಾಮಾನ್ಯವಾಗಿ ಹೇರಳವಾಗಿರುವುದಿಲ್ಲ. ಆದರೆ ಅವು ಆ ಕಾಲಮಿತಿಯಲ್ಲಿ ಸಂಚಯನಗೊಂಡ ಶಿಲೆಗಳಲ್ಲೆಲ್ಲ ಇರುತ್ತವೆ. ಸಾಮಾನ್ಯವಾಗಿ ಹೇಳುವುದಾದರೆ ಕ್ಲಿಷ್ಟ ದೇಹರಚನೆ ಮತ್ತು ಅತಿ ಪ್ರಾವೀಣ್ಯ ಗಳಿಸಿರುವ ಜೀವಿಗುಂಪುಗಳು, ಸರಳ ಆದ್ಯವಸ್ಥೆಯ ಜೀವಿಗುಂಪುಗಳಿಗಿಂತ ಉತ್ತಮ ಕಾಲಸೂಚಿಗಳನ್ನು ಒದಗಿಸಬಲ್ಲವು. ಪ್ರಪಂಚದ ನಾನಾ ಭಾಗಗಳ ಶಿಲಾ ಸ್ತೋಮಗಳಿರುವ ಜೀವಿಗಳ ಜಾತಿ ಪರಂಪರೆಯ ನಿರಂತರ ಸಂಶೋಧನೆಗಳ ಅನುಭವದ ಫಲವಾಗಿ ಪ್ರಾಚೀನ ಜೀವಿವಿಜ್ಞಾನಿಗಳು ಹೊಸ ಜಾತಿ ಮತ್ತು ವಿಧಗಳ ಜೀವ್ಯವಶೇಷಗಳ ವಯಸ್ಸನ್ನು ಅವುಗಳಿರುವ ಶಿಲೆಗಳ ವಯಸ್ಸು ಗೊತ್ತಿಲ್ಲದಿದ್ದರೂ ನಿರ್ಧರಿಸಲು ಶಕ್ತರಾಗಿದ್ದಾರೆ. ಜೀವ್ಯವಶೇಷಗಳ ವಿಕಾಸದ ಮಟ್ಟದ ಮೇಲೆ ಅವುಗಳ ವಯೋನಿರ್ಧಾರ ಮಾಡಲಾಗುವುದು. ಜೀವ ಪರಂಪರೆಯ ಕಾಲಾನುಕ್ರಮದ ಅಗಾಧ ಪರಿಶೋಧನೆಯಿಂದ ಭೂ ಇತಿಹಾಸದ ಮತ್ತೊಂದು ನಿಯಮ ರೂಪಿತವಾಗಿದೆ. ಜೀವ ಪರಂಪರೆಯ ಕ್ರಮ ಎಲ್ಲೂ ತಿರುಗುಮುರುಗಾಗಿಲ್ಲವೆಂದು ಈ ನಿಯಮ ಸಾರುತ್ತದೆ. ಒಂದೇ ಪ್ರದೇಶದಲ್ಲಿ ಇಡೀ ಜೀವಪರಂಪರೆ ಪ್ರತಿನಿಧಿತವಾಗಿಲ್ಲದೆ ಇರಬಹುದು. ಶಿಲಾಸ್ತೋಮಗಳು ಕಲಕಿರದಿದ್ದರೆ ಪ್ರತಿನಿಧಿಸಲ್ಪಟ್ಟಿರುವ ಭಾಗಗಳು ಆಯಾ ಸ್ಥಾನದಲ್ಲೇ ಇರುತ್ತವೆ. ಒಂದು ಜೀವಿ ಗುಂಪು ಜಾತಿ ಅಥವಾ ಪ್ರಕಾರ ಗತವಂಶಿಯಾದರೆ ಪುನಃ ಕಾಣಿಸಿಕೊಳ್ಳಲಾರದು. ಅದು ಗತವಂಶಿಯಾದ ಮೇಲೆ ಬೇರೆ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಅದು ಗತವಂಶಿಯಾಗಿರಲಿಲ್ಲವೆಂದೂ ಸ್ವಪ್ರಾಂತದಲ್ಲಿ ಸನ್ನಿವೇಶ ಬದಲಾವಣೆಯ ಕಾರಣ ಅದಕ್ಕೆ ಸರಿಹೊಂದುವ ಸನ್ನಿವೇಶವಿರುವ ಪ್ರದೇಶಗಳಿಗೆ ವಲಸೆಹೋಗಿದೆಯೆಂದೂ ಅರ್ಥ. ಅದು ಅದೇ ಪ್ರದೇಶದಲ್ಲಿ ಪುನಃ ಕಾಣಿಸಿಕೊಂಡರೆ ಸ್ವಪ್ರಾಂತದಲ್ಲಿ ಅನುಕೂಲ ಸನ್ನಿವೇಶ ಪುನಃ ಉಂಟಾದ್ದರಿಂದ ವಾಪಸು ಬಂದಿದೆ ಎಂದು ಅರ್ಥ. ಬೇರೆ ಭೂಭಾಗಗಳ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಸನ್ನಿವೇಶ ಬದಲಾವಣೆಯೇ ಆಗದಿದ್ದರೆ ಬೇರೆಲ್ಲ ಕಡೆಗಳ ಜೀವಿವರ್ಗಗಳು ನಿರ್ನಾಮವಾದರೂ ಈ ಪ್ರದೇಶಗಳಲ್ಲಿ ಅವೇ ಮುಂದುವರಿಯುತ್ತವೆ. ಈ ಪ್ರದೇಶಗಳಲ್ಲಿ ಹಳೆಯ ಪಳೆಕೆಯ ಜೀವಿಗಳಿಗೆ ಆಶ್ರಯಸ್ಥಾನಗಳಾಗುತ್ತವೆ. ದೊಡ್ಡ ದ್ವೀಪಗಳು ಇಂಥ ಆಶ್ರಯ ಸ್ಥಾನಗಳಾಗಲು ಸಾಧ್ಯ. ಕಾಂಗರೂ ಮುಂತಾದ ಮಾರ್ಸೂಪಿಯಲ್ ಪ್ರಾಣಿಗಳ ಆಶ್ರಯಸ್ಥಾನವಾದ ಆಸ್ಟ್ರೇಲಿಯ ಇದಕ್ಕೆ ಉದಾಹರಣೆ. ಮಧ್ಯಜೀವಕಲ್ಪದಲ್ಲಿ ಹೇರಳವಾಗಿದ್ದ ಜಿಂಕ್‍ಗೊ ಮತ್ತು ಮೆಟಸೀಕ್ವಿಯ ಎಂಬ ಎರಡು ಸಸ್ಯಗಳಿಗೆ ಚೀನಾ ಆಶ್ರಯಿಸ್ಥಾನವಾಗಿದೆ. ಡೆವೋನಿಯನ್ ಯುಗದಲ್ಲಿ ವಾಯುಸೇವಿಸುವ ಮತ್ಸ್ಯದ ಸಂಬಂಧಿ, ಮತ್ತು ಕ್ರಿಟೇಷಿಯಸ್ ಯುಗದ ಅಂತ್ಯದಲ್ಲಿ ಗತವಂಶಿಯಾಯಿತೆಂದು ತಿಳಿಯಲಾಗಿದ್ದ ಲ್ಯಾಟಿಮೋರಿಯ ಮತ್ಸ್ಯ ಆಫ್ರಿಕಾಖಂಡದ ತೀರದಲ್ಲಿ ಇನ್ನೂ ಜೀವಿಸಿರುವುದನ್ನು ಇತ್ತೀಚೆಗೆ ಪತ್ತೆ ಹಚ್ಚಲಾಯಿತು. ಜೀವಪರಂಪರೆಯ ಕ್ರಮನಿಯಮವನ್ನು ಆಧುನಿಕ ಜೀವಕಲ್ಪದ ಶಿಲಾಸ್ತೋಮಗಳಿಗೆ ಅನ್ವಯಿಸಲು ಸಾಧ್ಯವಾಗಿಲ್ಲ. ಈ ಶಿಲಾಶ್ರೇಣಿಗಳಲ್ಲಿ ಸದ್ಯ ಜೀವಿಸಿರುವ ಪ್ರಾಣಿಗಳು ಎಷ್ಟು ಪ್ರಮಾಣದಲ್ಲಿ ಪ್ರಾತಿನಿಧಿಕವಾಗಿವೆ ಎಂಬ ಅಂಶವನ್ನು ಸರ್ ಚಾರಲ್ಸ್ ಲಯಲ್ ವಿಭಜನೆಗೆ ಆಧಾರವಾಗಿಟ್ಟುಕೊಂಡಿದ್ದಾರೆ.

	ಪ್ರಾಣಿವಿಜ್ಞಾನಿಗಳು ಮತ್ತು ಅಂಗರಚನಾ ವಿಜ್ಞಾನಿಗಳು ಕಶೇರುಕ ಪ್ರಾಣಿಗಳ ಅವಶೇಷಗಳನ್ನು, ಹಾಲಿ ಜೀವಿಸುತ್ತಿರುವ ಪ್ರಾಣಿಗಳ ಅಸ್ಥಿಗಳನ್ನು ಅಧ್ಯಯನ ಮಾಡುವ ರೀತಿಯಲ್ಲಿಯೇ ಮಾಡಲು ಪ್ರಾರಂಭಿಸಿದರು. ಇದರಿಂದ ಪ್ರಾಣಿಜಗತ್ತಿನಲ್ಲಿ ಈ ಪ್ರಾಣಿಗಳ ವ್ಯವಸ್ಥಿತ ಸ್ಥಾನ ಮತ್ತು ಹುಟ್ಟಿ ಬೆಳೆದ ಸ್ಥಳ ಸನ್ನಿವೇಶ ಮುಂತಾದ ವಿಷಯಗಳನ್ನು ತಿಳಿಯಲು ಸಹಾಯಕವಾಗುವುದು. ಈ ಅನ್ವೇಷಣೆಯಲ್ಲಿ ಫ್ರಾನ್ಸಿನ ಕುವಿಯರ್ ಎಂಬುವರಿಗೆ ಅಗ್ರಸ್ಥಾನವಿದೆ. ಇವರು ಸರೀಸೃಪಗಳು ಮತ್ತು ಸಸ್ತನಿಗಳ ಎಲುಬುಗಳು ಮತ್ತು ಹಲ್ಲುಗಳ ನಿಖರ ವರ್ಣನೆ ಮಾಡಿ ಆ ಪ್ರಾಣಿಗಳ ಪೂರ್ಣ ಅಸ್ಥಿಪಂಜರಗಳನ್ನು ರೂಪಿಸಿ ವ್ಯವಸ್ಥಿತ ಕ್ರಮದಲ್ಲಿ ಅವುಗಳ ಸ್ಥಾನವನ್ನು ನಿರ್ಧರಿಸಿದ್ದಾರೆ. ಅಲ್ಲದೆ ಅವರು ಜೀವಿಯ ಅಂಗೋಪಾಂಗಗಳ ಸರಿದೂಗುವಿಕೆಯ ನಿಯಮವನ್ನು ರೂಪಿಸಿದ್ದಾರೆ. ಈ ನಿಯಮ ಜೀವಿಯ ಪ್ರತಿಯೊಂದು ಅಂಗ ಅದರ ರೂಪು ಆಕಾರಾದಿ ಲಕ್ಷಣಗಳಲ್ಲಿ ಇತರ ಅಂಗಗಳಿಗೆ ಸಂಬಂಧ ಹೊಂದಿದೆ ಎಂದು ಸಾರುತ್ತದೆ. ಆದರೆ ಬೆರಾನ್ ಜಾರ್ಜೆಸ್ ಕುವಿಯರ್ ಪ್ರಳಯವಾದಿಗಳಾಗಿದ್ದರು. ಪ್ರತಿಯೊಂದು ಭೂಚಲನೆಯ ಕಾಲದಲ್ಲಿಯೂ ಜೀವರಾಶಿ ಸಂಪೂರ್ಣವಾಗಿ ನಾಶ ಹೊಂದಿ ಅನಂತರ ಹೊಸ ಭೂಮೇಲ್ಮೈ ಲಕ್ಷಣಗಳೊಂದಿಗೆ ಹೊಸ ಜೀವರಾಶಿ ಉದ್ಭವಿಸುವುದೆಂದು ನಂಬಿದ್ದರು. ಹೀಗೆ ಪ್ರತಿಯೊಂದು ಜೀವಿಗುಂಪೂ ಆಯಾ ಜೀವಕಲ್ಪದ ಆದಿಯಲ್ಲಿ ಪ್ರತ್ಯೇಕವಾಗಿ ಸೃಷ್ಟಿಸಲ್ಪಟ್ಟು ಆಯಾ ಜೀವಕಲ್ಪದ ಅಂತ್ಯದಲ್ಲಿ ನಡೆದ ಭೂಚಲನೆಯ ಪರಿಣಾಮವಾಗಿ ನಾಶ ಹೊಂದಿದೆ ಎಂದು ಅರ್ಥವಾಗುತ್ತದೆ. ಪ್ರಾಚೀನ ಜೀವವಿಜ್ಞಾನದ ಪರಿಶೋಧನೆ ಮುಂದುವರಿದಂತೆಲ್ಲ ಅನೇಕ ಪ್ರಾಣಿಗುಂಪುಗಳು ಭೂಕಾಲದಲ್ಲಿ ನಿಧಾನವಾಗಿ ಮತ್ತು ಅಖಂಡವಾಗಿ ಬದಲಾಗಿರುವುದು ಸ್ಪಷ್ಟವಾಯಿತು. ಆದಿಮ ಪ್ರಾಣಿಗಳು ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚುತ್ತವೆ. ಹೆಚ್ಚು ಹೆಚ್ಚು ಪ್ರಾವೀಣ್ಯಗಳಿಸುತ್ತವೆ. ಎಲ್ಲ ಪರಿಸರಗಳಿಗೂ ಹೊಂದಿಕೊಳ್ಳುತ್ತವೆ, ಉಚ್ಛ್ರಾಯ ಸ್ಥಿತಿಯ ಶಿಖರ ಮುಟ್ಟುತ್ತವೆ, ಅನಂತರ ಅವನತಿ ಮಾರ್ಗದಲ್ಲಿ ಸಾಗಿ ಗತವಂಶಿಗಳಾಗುತ್ತವೆ. ಭೂ ಇತಿಹಾಸದ ಶಿಲಾಸ್ತಂಭ ವೀಕ್ಷಣೆ ಜೀವಿಗಳು ಕ್ರಮೇಣ ಆದ್ಮವಸ್ಥೆಯಿಂದ ವಿಕಾಸದ ಉನ್ನತ ಮಟ್ಟವನ್ನು ಏರುವುದನ್ನು ದೃಢೀಕರಿಸುತ್ತದೆ. ಪ್ರಾಚೀನ ಜೀವವಿಜ್ಞಾನ ಜೀವಿಗಳಲ್ಲಿ ವಿಕಾಸ ನಡೆದಿದೆ ಎಂದು ಸ್ಪಷ್ಟೀಕರಿಸುತ್ತದೆ. ಅಲ್ಲದೆ ವ್ಯಕ್ತಿವಿಕಾಸದಲ್ಲಿ ವಂಶವಿಕಾಸ ಮರುಕಳಿಸುವ ಅಂಶವನ್ನು ಅಂದರೆ ಪ್ರತಿ ವ್ಯಕ್ತಿಯೂ ತನ್ನ ವಂಶದ ಇತಿಹಾಸವನ್ನು ಭ್ರೂಣಾವಸ್ಥೆಯಲ್ಲಿ ನೆನೆಯುತ್ತದೆ ಎಂಬುದನ್ನು ಪುಷ್ಟೀಕರಿಸುತ್ತದೆ (ಡಿ ಅರ್ಬಿಗಿನಿ).

	ಜೀವ್ಯವಶೇಷಗಳು ಮತ್ತು ಪ್ರಾಚೀನ ಭೂವಿವರಣೆ: ಜೀವ್ಯವಶೇಷಗಳು ಪ್ರಾಚೀನ ಕಾಲದ ಭೂ ವಿವರಣೆಯನ್ನು ರಚಿಸಲು ಸಹಾಯಕವಾಗಿವೆ. ನೆಲಜಲಗಳ ಹಂಚಿಕೆ, ಹವಾಗುಣ, ವಾತಾವರಣ ಮುಂತಾದ ವಿಷಯಗಳ ಬಗ್ಗೆಯೂ ಬೆಳಕು ಬೀರುತ್ತವೆ. ವರ್ತಮಾನ ಕಾಲದಲ್ಲಿ ಕೆಲವು ಪ್ರಾಣಿಗುಂಪುಗಳು ಕಡಲುಗಳಲ್ಲಿ ಮಾತ್ರ ವಾಸಿಸುತ್ತವೆ. ಉದಾಹರಣೆಗೆ ಕಂಟಕಚರ್ಮಿಗಳು, ಬಹುಪದಿಗಳು ಮತ್ತು ಕುಟುಕುಕಣವಂತಗಳು ಸಾಮಾನ್ಯವಾಗಿ ಸಾಗರವಾಸಿಗಳು. ಹವಳಗಳಂತೂ ಸಂಪೂರ್ಣವಾಗಿ ಸಾಗರವಾಸಿಗಳು. ಮೃದ್ವಂಗಿಗಳಲ್ಲಿ ಸ್ಕಾಪೊಪೋಡ ಮತ್ತು ಶಿರೋಪಾದಿಗಳು ಸಾಗರವಾಸಿಗಳು. ಆದರೆ ಕಪ್ಪೆಚಿಪ್ಪುಗಳು ಮತ್ತು ಉದರಪಾದಿಗಳಲ್ಲಿ ಕೆಲವು ಸಾಗರವಾಸಿಗಳು ಮತ್ತೆ ಕೆಲವು ಸಿಹಿನೀರು ಜಲಾಶಯಗಳಲ್ಲಿ ವಾಸಿಸುವಂಥವು. ಪ್ರಾಚೀನ ಕಾಲದಲ್ಲಿಯೂ ಈ ಪ್ರಾಣಿಗುಂಪುಗಳು ಇದೇ ಸನ್ನಿವೇಶಗಳಲ್ಲಿ ವಾಸಿಸುತ್ತಿದ್ದುವೆಂದು ಇಟ್ಟುಕೊಂಡರೆ, ಇವುಗಳ ಅವಶೇಷವಿರುವ ಶಿಲೆಗಳು ಸಾಗರದಲ್ಲಿ ಸಂಚಯಿಸಿದವೊ ನೆಲದಲ್ಲಿ ಸಂಚಯಿಸಿದವೊ ಎಂದು ತಿಳಿಯಲು ಸಾಧ್ಯವಾಗುವುದು. ಇದೇರೀತಿ ಹವಳದಿಬ್ಬಗಳು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶದ ತೆಟ್ಟೆ ಸಾಗರತೀರಗಳಲ್ಲಿರುತ್ತವೆ (ಲೋಪೊಹೆಲಿಯೊ ಎಂಬ ಹವಳ ಇದಕ್ಕೆ ಹೊರತು.) ಹೆಲಿಯೊಲೈಟಿಸ್ ಎಂಬ ಮತ್ಸ್ಯ ನಿರ್ದಿಷ್ಟ ಉಷ್ಣತಾಮಿತಿಗಳಿಂದ ಕೂಡಿದ ಸಾಗರ ಪ್ರದೇಶಗಳಲ್ಲಿ ವಾಸಿಸುತ್ತದೆ. ಹೀಗೆ ಜೀವ್ಯವಶೇಷಗಳ ವಿಶೇಷ ಅಧ್ಯಯನದಿಂದ ಪ್ರತಿಯೊಂದು ಯುಗದ ನೆಲಜಲಗಳ ಹಂಚಿಕೆ. ಹವಾಗುಣ ಮುಂತಾದ ವಿವರಗಳನ್ನು ತಿಳಿದು ಆಯಾ ಯುಗದ ಪ್ರಾಚೀನ ಭೂವಿವರಣೆಯನ್ನು ರೂಪಿಸಬಹುದು.

	ಇತ್ತೀಚೆಗೆ ಸೂಕ್ಷ್ಮಜೀವಿಗಳ ಅಥವಾ ಸೂಕ್ಷ್ಮಾವಶೇಷಗಳ ಪರಿಶೋಧನೆಯತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ. ಫೊರಮಿನಿಫೆರ, ರೇಡಿಯೊಲೇರಿಯ ಮುಂತಾದ ಏಕಕಣಜೀವಿಗಳು ಗಾತ್ರದಲ್ಲಿ ಬಲು ಚಿಕ್ಕವು. ಅವನ್ನು ಸೂಕ್ಷ್ಮದರ್ಶಕದಡಿಯಲ್ಲಿ ಮಾತ್ರ ಅಧ್ಯಯನ ಮಾಡಬಹುದು. ಪೆಟ್ರೋಲಿಯಮ್ ಕೈಗಾರಿಕೆಯ ಬೆಳವಣಿಗೆಯ ಪರಿಣಾಮವಾಗಿ ಈ ಅಧ್ಯಯನ ಆರ್ಥಿಕ ಪ್ರಾಮುಖ್ಯವನ್ನು ಗಳಿಸಿದೆ. ಟೀರೊಪಾಡ್ ಎಂಬ ಮೃದ್ವಂಗಿಗಳು ಮತ್ತು ಆಸ್ಟ್ರಕೋಡ ಎಂಬ ಸಂಧಿಪದಿಗಳು ಅಂತೆಯೇ ಸಸ್ಯಗಳಲ್ಲಿ ಅಲ್ಗಿ ಮತ್ತು ಡಯಾಟಮ್ ಗುಂಪಿನವು ಅತಿಸೂಕ್ಷ್ಮ ಗಾತ್ರದವು. ಇವೆಲ್ಲವನ್ನೂ ಸೂಕ್ಷ್ಮದರ್ಶಕದ ಸಹಾಯವಿಲ್ಲದೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ಷ್ಮಪ್ರಾಗ್ಜೀವ ವಿಜ್ಞಾನ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯ ಗಳಿಸಿದೆ. ಬೀಜಕಣಗಳು ಮತ್ತು ಪರಾಗಕಣಗಳು ಅತ್ಯಂತ ಚಿಕ್ಕವು. ಇವುಗಳ ಅಧ್ಯಯನಕ್ಕೂ ಸೂಕ್ಷ್ಮದರ್ಶಕದ ಸಹಾಯ ಬೇಕು.

	ಜೀವವಿಜ್ಞಾನಿಗಳು ಜೀವದ ಹುಟ್ಟಿನ ಬಗ್ಗೆ ಅವರ ಸಂಶೋಧನೆಗಳ ಫಲಿತಾಂಶದ ಸಂಕ್ಷಿಪ್ತ ವರದಿಯನ್ನು 1957ರಲ್ಲಿ ಕೊಟ್ಟಿರುತ್ತಾರೆ. ವರ್ತಮಾನಕಾಲದ ವಾಯುಗೋಳದಲ್ಲಿ ಬಿಡಿಯಾದ ಆಕ್ಸಿಜನ್ (ಅಸಂಯುಕ್ತ) ಸಾಕಷ್ಟು ಪ್ರಮಾಣದಲ್ಲಿರುವುದು. ಅದು ಜಲಗೋಳದಲ್ಲಿ ವಿಲೀನ ಸ್ಥಿತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ನೆಲವಾಸಿ ಮತ್ತು ಜಲವಾಸಿ ಜೀವಿಗಳ ಉಸಿರಾಟಕ್ಕೆ ಈ ಆಕ್ಸಿಜನ್ ಅತ್ಯಾವಶ್ಯಕ. ಮೇಲಾಗಿ ವಾಯುಗೋಳದ ಮೇಲ್ಭಾಗದಲ್ಲಿ ಓಜೋನಿನ ತೆಳುಪದರವಿದೆ. ಇದು ಸೂರ್ಯನ ಕಿರಣಗಳಿಂದ ಬರುವ ಅತಿನೇರಿಳೆ ಕಿರಣಗಳು ಭೂಮೇಲ್ಮೈಯನ್ನು ತಲಪದ ಹಾಗೆ ತಡೆಹಿಡಿಯುತ್ತವೆ. ಇವು ಸಾಕಷ್ಟು ಪ್ರಮಾಣದಲ್ಲಿ ಭೂ ಮೇಲ್ಮೈಯನ್ನು ತಲಪಿದ್ದಾದರೆ ನೆಲ ಮತ್ತು ಜಲವಾಸಿ ಜೀವಿಗಳೆಲ್ಲ ನಿರ್ನಾಮವಾಗುತ್ತವೆ. ಆಕ್ಸಿಜನ್ ಇಲ್ಲದೆ ಜೀವಿಸಬಲ್ಲ ಅಣುಜೀವಿಗಳು ಮಾತ್ರ ಹೇಗೋ ಜೀವಿಸಬಲ್ಲವು. ಅದೂ ಅತಿನೇರಿಳೆ ಕಿರಣಗಳನ್ನು ಮಣ್ಣು ಅಥವಾ ನೀರು ತಡೆಹಿಡಿದು ರಕ್ಷಣೆ ಒದಗಿಸಿದರೆ ಮಾತ್ರ. ಆದ್ದರಿಂದ ವರ್ತಮಾನ ಕಾಲದಲ್ಲಿ ಇರುವ ಪರಿಸ್ಥಿತಿಯಲ್ಲಿ ನಿರ್ಜೀವವಸ್ತುಗಳ ಸಂಯೋಗದಿಂದ ಜೀವಕಣಗಳು ಉತ್ಪತ್ತಿಯಾಗಿ, ಉಳಿಯಲು ಸಾಧ್ಯವೇ ಇಲ್ಲ. ಉತ್ಪತ್ತಿಯಾದ ಸೂಕ್ಷ್ಮ ಜೀವಕಣಗಳು ಅಜೈವಿಕ ಆಕ್ಸೀಕರಣ ವಿಧಾನ ಅಥವಾ ಜೈವಿಕ ಆಕ್ಸೀಕರಣ ವಿಧಾನದಿಂದ ಬಲುಬೇಗ ನಾಶಹೊಂದುತ್ತವೆ.

	ಜೀವದ ಹುಟ್ಟನ್ನು ವಿವರಿಸುವ ಕಲ್ಪನೆ ಅಥವಾ ವಾದಗಳೆಲ್ಲ ಆದಿಯಲ್ಲಿ ಆಕ್ಸಿಜನ್ ಸಂಯುಕ್ತ ಸ್ಥಿತಿಯಲ್ಲಿ ಮಾತ್ರ ಇತ್ತು, ಅದರಲ್ಲೂ ನೀರಿನಲ್ಲಿ ಇದ್ದುದೇ ಪ್ರಧಾನವಾದುದು. ಆಗಿನ ಕಾಲದಲ್ಲಿ ವಾಯುಗೋಳ ಮತ್ತು ಜಲಗೋಳಗಳಲ್ಲಿ ಇಂಗಾಲ, ನೈಟ್ರೊಜನ್ ಇತರ ಧಾತುಗಳೂ ಇದ್ದುವು. ಇವುಗಳ ಪೈಕಿ ಗಂಧಕ ಮತ್ತು ರಂಜಕಗಳು ಮುಖ್ಯವಾದವು. ವಾಯುಗೋಳದ ಮೇಲ್ಭಾಗದಲ್ಲಿ ಓಜೋನ್ ಪದರ ಇರಲಿಲ್ಲ. ಆದ್ದರಿಂದ ಅತಿನೇರಿಳೆ ಕಿರಣಗಳು ತಡೆಯಿಲ್ಲದೆ ಭೂಮಿಯ ಮೇಲ್ಮೈಯನ್ನು ತಲಪುತ್ತಿದ್ದುವು. ಈ ಕಿರಣಗಳಿಗೆ ಅತಿ ಕ್ರಿಯಾಕಾರಕ ಶಕ್ತಿಯುಂಟು. ಇವು ಆಕ್ಸಿಜನ್ನನ್ನು ಸೇವಿಸುವ ಸಸ್ಯ ಮತ್ತು ಪ್ರಾಣಿಗಳಿಗೆ ಮಾರಕವಾದರೂ ಮಣ್ಣು ಅಥವಾ ನೀರಿನಿಂದ ರಕ್ಷಿಸಲ್ಪಟ್ಟ ವಾತಾವರಣದಲ್ಲಿ ನಿರ್ಜೀವ ವಸ್ತುಗಳು ಸಂಯೋಗಿಸಿ ಜೀವವಸ್ತುವಾಗಿ ಪರಿವರ್ತಿಸುವ ಆಕ್ಸಿಜನ್ನನ್ನು ಸೇವಿಸದೆ ಜೀವಿಸಬಲ್ಲ ಅತಿಸರಳ ಅಣುಜೀವಿಗಳನ್ನು ಉತ್ಪತ್ತಿ ಮಾಡಬಲ್ಲ ಕ್ರಿಯಾಕಾರಕ ಶಕ್ತಿ ಹೊಂದಿವೆ. ಅಂದರೆ ನಿರ್ಜೀವ ದ್ಯುತಿಸಂಶ್ಲೇಷಣೆ ಆಗಲು ಎಡೆಮಾಡಿ ಕೊಡುತ್ತವೆ. ಇದಕ್ಕೂ ವರ್ತಮಾನ ಕಾಲದಲ್ಲಿ ಹರಿತ್ತಿನ (ಕ್ಲೋರೊಫಿಲ್) ಸಹಾಯದಿಂದ ಸಸ್ಯಗಳಲ್ಲಿ ಆಗುವ ದ್ಯುತಿಸಂಶ್ಲೇಷಣೆಗೂ ನಡುವೆ ವ್ಯತ್ಯಾಸವಿದೆ. ಮೊದಲನೆಯದರಲ್ಲಿ ಅನೇಕ ಧಾತುಗಳು ಭಾಗವಹಿಸುತ್ತವೆ. ರಾಸಾಯನಿಕ ವೈವಿಧ್ಯವೂ ಹೆಚ್ಚು. ಆದರೆ ರಚನೆ ಮಾತ್ರ ಬಲು ಸರಳ. ಎರಡನೆಯದರಲ್ಲಿ ಕೆಲವೇ ಧಾತುಗಳು ಭಾಗವಹಿಸುತ್ತವೆ. ರಾಸಾಯನಿಕ ಸಾಮ್ಯ ಇದೆ. ಆದರೆ ಬಾಹ್ಯ ರೂಪ ಬಲು ಕ್ಲಿಷ್ಟ. ಪಿಯರಿಯವರು ಈ ವಿಷಯವನ್ನು ನಕ್ಷೆಯ ಸಹಾಯದಿಂದ ಸೊಗಸಾಗಿ ನಿರೂಪಿಸಿರುವರು. ಇದರಲ್ಲಿ ಎರಡು ಶಂಕುಗಳಿರುವುವು. ತಳಶಂಕು ಆಕ್ಸಿಜನ್‍ರಹಿತ ವಾತಾವರಣದಲ್ಲಿ ಜೀವಿಸಿದ್ದಿರಬಹುದಾದ ಆದಿ ಜೀವವನ್ನೂ ಅಗ್ರ ಶಂಕು ಆಕ್ಸಿಜನ್‍ರಹಿತ ವಾತಾವರಣದಲ್ಲಿ ಜೀವಿಸುವ ಅಂದರೆ. ವರ್ತಮಾನಕಾಲದ ಮಾದರಿ ಜೀವವನ್ನೂ ಪ್ರತಿನಿಧಿಸುತ್ತವೆ.

	ಆದಿಯಲ್ಲಿ ದ್ಯುತಿಸಂಶ್ಲೇಷಣೆಯಿಂದ ಜೀವಾಮ್ಲ ಉತ್ಪತ್ತಿಯಾಯಿತು. ಚಿಕ್ಕ ಜೀವಕಣಗಳು ಬೆಣಚು ಮತ್ತು ಜೇಡು ಮಂದಗಟ್ಟುವುದರ ಮೂಲಕ ಒಂದುಗೂಡಿ ದೊಡ್ಡ ಜೀವಕಣಗಳಾದುವು. ಈ ದಿಶೆಯಲ್ಲಿ ಗಂಧಕ ಮತ್ತು ಸಲ್ಫೈಡ್ ಖನಿಜಗಳು ಪ್ರಚೋದಕಗಳಾಗಿ ವರ್ತಿಸಿ, ಜೀವದ್ರವ್ಯ ಪರಿಣಾಮ ಮತ್ತು ಸಂತಾನಾಭಿವೃದ್ಧಿ ಮಾಡುವ ಶಕ್ತಿಯುಳ್ಳ ದೊಡ್ಡಕಣಗಳಾಗಲು ಸಹಾಯಕವಾದುವು. ಕಾಲಾನುಕಾಲದಲ್ಲಿ ಇವು ಜೈವಿಕ ದ್ಯುತಿಸಂಶ್ಲೇಷಣೆ ಮಾಡುವ ಶಕ್ತಿಯನ್ನೂ ಪಡೆದುವು. ಅಂದರೆ ಇಂಗಾಲದ ಡೈಆಕ್ಸೈಡನ್ನು ಇಂಗಾಲ ಮತ್ತು ಆಕ್ಸಿಜನ್ನುಗಳಾಗಿ ಬೇರ್ಪಡಿಸಿ, ಇಂಗಾಲವನ್ನು ಉಪಯೋಗಿಸಿಕೊಂಡು, ಆಕ್ಸಿಜನ್ನನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದುವು. ಆಕ್ಸಿಜನ್ ಅಸಂಯುಕ್ತ ಸ್ಥಿತಿಯಲ್ಲಿ ವಾಯುಗೋಳದಲ್ಲೆಲ್ಲ ಹರಡಿತು ಮತ್ತು ಕ್ರಮೇಣ ಓಜೋನ್ ಪದರ ರೂಪುಗೊಂಡಿತು; ವಾಯುಗೋಳದಲ್ಲಿರುವ ಆಕ್ಸಿಜನ್ ಮತ್ತು ಓಜೋನ್ ಪದರ ಜೀವಜನಿತವಾದುದೆಂದು ಖಗೋಳವಿಜ್ಞಾನಿಗಳು ಸಹ ಒಪ್ಪಿಕೊಳ್ಳುತ್ತಾರೆ. ಆಕ್ಸಿಜನ್‍ರಹಿತ ವಾಯುಗೋಳ ಆಕ್ಸಿಜನ್‍ಭರಿತ ವಾಯುಗೋಳವಾಗಿ ಪರಿವರ್ತನೆಗೊಂಡಿತು. ಪರಿವರ್ತನೆಯ ಅವಧಿ ಬಲು ದೀರ್ಘವಾದುದು. ಈ ಸಂಧಿಕಾಲದಲ್ಲಿ ಆಕ್ಸಿಜನ್ ಸೇವಿಸದ ಮತ್ತು ಆಕ್ಸಿಜನ್ ಸೇವಿಸುವ ಎರಡೂ ಗುಂಪುಗಳ ಜೀವಿಗಳು ಸಹಬಾಳ್ವೆ ನಡೆಸಿದುವು. ಜೀವಿವಿಕಾಸವಾದ ಈ ಕೆಳಗಿನ ಏಳು ಪರಿಕಲ್ಪನೆಗಳನ್ನು ಅವಲಂಬಿಸಿದೆ; 

	1 ನಿರ್ಜೀವ ವಸ್ತುವಿನಿಂತ ಜೀವವಸ್ತು ಉತ್ಪತ್ತಿಯಾಯಿತು. (ಅಂತಃಪ್ರೇರಿತ ಉತ್ಪತ್ತಿ ಜರಗಿತು).

	2 ಅಂತಃಪ್ರೇರಿತ ಉತ್ಪತ್ತಿ ಒಂದೇ ಒಂದು ಸಾರಿ ಮಾತ್ರ ಆಯಿತು (ಉಳಿದ ಐದು ಪರಿಕಲ್ಪನೆಗಳು ಈ ಪರಿಕಲ್ಪನೆಯ ಮೇಲೆ ಆಧಾರಿತವಾದವು).

	3 ವೈರಸ್, ಬ್ಯಾಕ್ಟೀರಿಯ, ಸಸ್ಯ ಮತ್ತು ಪ್ರಾಣಿ ಪರಸ್ಪರ ಸಂಬಂಧ ಹೊಂದಿವೆ.

	4 ಏಕಕಣ ಪ್ರಾಣಿಗಳಿಂದ ಬಹುಕಣ ಪ್ರಾಣಿಗಳು ಉದಯಿಸಿದುವು.

	5 ಅಕಶೇರುಕ ಪ್ರಾಣಿವರ್ಗಗಳೆಲ್ಲ ಪರಸ್ಪರ ಸಂಬಂಧ ಹೊಂದಿವೆ.

	6 ಅಕಶೇರುಕಗಳಿಂದ ಕಶೇರುಕಗಳು ಉದಯಿಸಿದವು.

	7 ಕಶೇರುಕಗಳಲ್ಲಿ ಮತ್ಸ್ಯಗಳಿಂದ ದ್ವಿಚರಪ್ರಾಣಿಗಳೂ ಇವುಗಳಿಂದ ಸರೀಸೃಪಗಳೂ ಇವುಗಳಿಂದ ಪಕ್ಷಿ ಮತ್ತು ಸಸ್ತನಿಗಳೂ ಉದಯಿಸಿದವು.

	ಭೂಕಾಲದ ಕೊನೆಯ 50-60 ಕೋಟಿ ವರ್ಷಗಳಲ್ಲಿ ಅಂದರೆ ಕೇಂಬ್ರಿಯನ್ ಯುಗದ ಅನಂತರ ಜೀವಿಸಿದ್ದ ಸಸ್ಯಗಳ ಮತ್ತು ಪ್ರಾಣಿಗಳ ಅವಶೇಷಗಳು ಶಿಲಾಸ್ತೋಮಗಳಲ್ಲಿ ಅತ್ಯುತ್ತಮವಾಗಿ ರಕ್ಷಿತವಾಗಿವೆ. ಇದು ಭೂಕಾಲದ ಎಂಟನೆಯ ಒಂದು ಭಾಗ ಮಾತ್ರ. ಉಳಿದ ಕಾಲಗಳ ಜೀವಿಗಳ ಬಗ್ಗೆ ನಮಗೆ ತಿಳಿದಿರುವುದು ಅತ್ಯಲ್ಪ. ಪ್ರಾಣಿಗಳನ್ನು ಹತ್ತು ವರ್ಗಗಳಾಗಿ ವಿಂಗಡಿಸಿದೆ. ಇವುಗಳ ಪೈಕಿ ಒಂಬತ್ತು ವರ್ಗಗಳನ್ನು ಕೇಂಬ್ರಿಯನ್ ಯುಗದ ಆದಿಯಲ್ಲಿ ಪ್ರತಿನಿಧಿಸಲಾಗಿದೆ. ಇವು ವಿಕಾಸಪಥದಲ್ಲಿ ಬಲು ಮುಂದೆ ಸಾಗಿವೆ. ಆದ್ದರಿಂದ ಜೀವಿಗಳು ಕೇಂಬ್ರಿಯನ್ ಯುಗಕ್ಕಿಂತ ಬಲು ಹಿಂದೆಯೇ ಇದ್ದುವು ಎಂಬುದು ನಿರ್ವಿವಾದ. 200 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಆಕ್ಸಿಜನ್‍ರಹಿತ ವಾತಾವರಣವಿದ್ದುದರ ಕುರುಹುಗಳಿವೆ. ಇಂಥ ವಾತಾವರಣದಲ್ಲಿ ಜೀವಿಸಿದ್ದ ಜೀವಿಗಳ ಅವಶೇಷಗಳೂ ದೊರಕಿವೆ. ಕೆನಡಾದ ಆಂಟೇರಿಯೋ ಪ್ರಾಂತ್ಯದ ಗನ್‍ಫ್ಲಿಂಟ್ ಕಬ್ಬಿಣ ಶಿಲಾಸ್ತೋಮಗಳ ಅವಶೇಷಗಳು 160 ಕೋಟಿ ವರ್ಷಗಳ ಹಿಂದಿನವು. ದಕ್ಷಿಣ ರೊಡೇಷಿಯದ ಬುಲವಯೋ ಸುಣ್ಣಶಿಲೆಯಲ್ಲಿ ಕಾಣುವ ರಚನೆಗಳು ಅವು ಜೈವಿಕ ನಿಕ್ಷೇಪಗಳೆಂದು ಸೂಚಿಸುತ್ತವೆ. ಹಾಗಾದಲ್ಲಿ ಅವು ಅತ್ಯಂತ ಪ್ರಾಚೀನ ಜೈವಿಕ ನಿಕ್ಷೇಪಗಳಾಗುತ್ತವೆ. ಸುಮಾರು 100 ಕೋಟಿ ವರ್ಷಗಳ ಹಿಂದೆ ಆಕ್ಸಿಜನ್‍ಭರಿತ ವಾಯುಗೋಳ ರೂಪುಗೊಂಡಿತು. ಆದಿಯಲ್ಲಿ ನಡೆಯಿತೆನ್ನಲಾದ ನಿರ್ಜೀವ ದ್ಯುತಿಸಂಶ್ಲೇಷಣೆಯ ವಿಧಾನದ ನಿಖರ ವಿವರಣೆ. ಆದಿಜೀವಿಗಳ ಬಾಹ್ಯರೂಪುರೇಖೆಗಳು ಮತ್ತು ಅವುಗಳಲ್ಲಿ ಆದ ವಿಕಾಸಗಳ ವಿವರ ಇತ್ಯಾದಿ ವಿಷಯಗಳು ಮಾನವನ ಅರಿವಿಗೆ ಎಟುಕಲಾರದವಾಗಿಯೇ ಉಳಿದಿವೆ. ಹೀಗೆ ಪ್ರಾಗ್ಜೀವವಿಜ್ಞಾನ ಜೀವದ ಹುಟ್ಟಿನ ಅರಿವಿಗೆ ಸಹ ತನ್ನ ಕೊಡುಗೆಯನ್ನಿತ್ತಿದೆ.

	ಜೀವ್ಯವಶೇಷಗಳ ಆಧಾರದ ಮೇಲೆ ಭೂಕಾಲವನ್ನು ನಿರ್ಜೀವ ಕಲ್ಪ, ಆದಿಜೀವ ಕಲ್ಪ, ಪ್ರಾಚೀನ ಜೀವಕಲ್ಪ, ಮಧ್ಯಜೀವಕಲ್ಪ ಮತ್ತು ನವಜೀವಕಲ್ಪ ಎಂದು ಐದು ಮುಖ ಭಾಗಗಳಾಗಿ ವಿಭಾಗಿಸಲಾಗಿದೆ.					    (ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ